ವಿಶೇಷ ಸೂಚನೆ

ಹೊನ್ನಪ್ಪ ಭಾಗವತರ್

ಚಲನಚಿತ್ರ - ರಂಗಭೂಮಿ - ಸಂಗೀತ ಈ ಮೂರು ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಹೊನ್ನಪ್ಪ ಭಾಗವತರ್ ಜನಿಸಿದ್ದು ೧೯೧೫ರಲ್ಲಿ, ನೆಲಮಂಗಲ ತಾಲೂಕಿನ ಚೌಡಸಂದ್ರದಲ್ಲಿ. ತಂದೆ ಚಿಕ್ಕಲಿಂಗಪ್ಪ.

ಚಿಕ್ಕಂದಿನಲ್ಲಿ ತಾಯಿ ಹಾಡುತ್ತಿದ್ದ ಭಜನೆಗಳಿಂದ ಆಕರ್ಷಿತರಾದ ಹೊನ್ನಪ್ಪ, ಸಂಗೀತದಲ್ಲಿ ಒಲವು ಬೆಳೆದು, ಆ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಛಲದಿಂದ ಊರು ತೊರೆದು ಬೆಂಗಳೂರಿಗೆ ಬಂದರು.ಅಲ್ಲಿ ಮೂರ್ತಿ ಭಾಗವತ್ರಿಂದ ಸಂಗೀತದ ಆರಂಭದ ಪಾ� ಹಾಗೂ ಆರುಣಾಚಲಪ್ಪನವರಿಂದ ಹಾರ್ಮೋನಿಯಂ ಕಲಿತರು.

ತಮಿಳುನಾಡಿನ ಸೇಲಂನಲ್ಲಿ ನಡೆದ ಇವರ ಸಂಗೀತ ಕಛೇರಿ ಇವರ ಜೀವನಕ್ಕೆ ಹೊಸ ತಿರುವು ನೀಡಿತು. ಹಾಗೂ ಅಭಿಮಾನಿಗಳಿಂದ ’ಭಾಗವತ್' ಎಂಬ ಬಿರುದಿಗೆ ಪಾತ್ರರಾದರು. ಅಷ್ಟೇ ಅಲ್ಲದೇ ಸಂಗೀತ ಪ್ರಖ್ಯಾತಿಯಿಂದ 'ಅಂಬಿಕಾಪತಿ' ಎಂಬ ತಮಿಳು ಸಿನಿಮಾದ ನಾಯಕನ ಗೆಳೆಯನ ಪಾತ್ರಕ್ಕೆ ಆಯ್ಕೆಯಾದರು. ನಂತರ ನಾಯಕ ನಟರಾಗಿಯೂ ಜನಪ್ರಿಯರಾದರು. ಸುಮಾರು ೧೯ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ ಹೊನ್ನಪ್ಪನವರು ಆಗಿನ ಕಾಲದಲ್ಲೇ ರೂ.೫೦,೦೦೦/-ಗಳ ಸಂಭಾವನೆ ಪಡೆಯುತ್ತಿದ್ದರು.

ಮುಂದೆ ಗುಬ್ಷಿ ವೀರಣ್ಣನವರು ’ಸುಭದ್ರಾ' ಚಲನಚಿತ್ರದ ನಾಯಕನ ಪಾತ್ರಕ್ಕೆ ಆಹ್ವಾನವಿತ್ತಾಗ, ಕನ್ನಡದ ಮೇಲಿನ ಅಪಾರ ಪ್ರೀತಿಯಿಂದ ವೀರಣ್ಣನವರ ಆಹ್ವಾನವನ್ನೊಪ್ಪಿಕೊಂಡರು. ಅನಂತರ ಹೇಮರೆಡ್ಡಿ ಮಲ್ಲಮ್ಮ, ಭಕ್ತ ಕುಂಬಾರ, ಗುಣಸಾಗರಿ ಮುಂತಾದ ಚಲನಚಿತ್ರಗಳಲ್ಲಿನ ಅಭಿನಯದಿಂದ ಅಪಾರ ಜನಪ್ರಿಯತೆ ಪಡೆದರು. 'ಲಲಿತಕಲಾ ಫಿಲಂಸ್' ಎಂಬ ಸ್ವಂತ ಕನ್ನಡ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ 'ಮಹಾಕವಿ ಕಾಳಿದಾಸ' ಚಿತ್ರದಲ್ಲಿ ನಟನೆ ಹಾಗೂ ಸಂಗೀತ ನಿರ್ದೇಶನವನ್ನೂ ಮಾಡಿ ಜನಮನ್ನಣೆ ಗಳಿಸಿದರು. ಹಾಗೂ ಈ ಚಿತ್ರದಲ್ಲಿ ಬಿ.ಸರೋಜದೇವಿಗೆ ಪೂರ್ಣ ಪ್ರಮಾಣದ ನಾಯಕಿ ಪಾತ್ರವನ್ನು ನೀಡಿದ ಹಿರಿಮೆಯೂ ಭಾಗವತರಿಗೆ ಸಲ್ಲುತ್ತದೆ. ಅಷ್ಟೇ ಅಲ್ಲದೇ ಈ ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆಯಿತು. ನಂತರ ೧೯೬೧ರಲ್ಲಿ 'ಉಮಾಮಹೇಶ್ವರಿ ನಾಟಕ ಮಂಡಲಿ' ಆರಂಭಿಸಿ, ಶ್ರೀನಿವಾಸ ಕಲ್ಯಾಣ, ಬ್ರೋಕರ್ ಭೀಷ್ಮಾಚಾರಿ ಮುಂತಾದ ನಾಟಕಗಳನ್ನು ಕರ್ನಾಟಕದ ಉದ್ದಗಲಕ್ಕೂ ಪ್ರದರ್ಶಿಸಿ ಯಶಸ್ವಿಯಾದರು.

೧೯೭೯ರಲ್ಲಿ ರಾಜ್ಯ ಚಲನಚಿತ್ರೋದ್ಯಮ ಅಭಿವೃದ್ಧಿ ಸಂಸ್ಥೆಯ ನೆರವಿನಿಂದ 'ಸದಾನಂದ' ಎಂಬ ಕನ್ನಡ ಚಿತ್ರವನ್ನು ತಯಾರಿಸಿ, ಅದರಲ್ಲೂ ತಾವು ಅಭಿನಯಿಸಿದರು ಹೀಗೆ ಭಾಗವತರು ರಂಗಭೂಮಿ ಹಾಗೂ ಚಲನಚಿತ್ರ ರಂಗಕ್ಕೆ ನೀಡಿದ ಕೊಡುಗೆ ಅಪಾರ. ಇವರ ಕಲಾಪ್ರತಿಭೆಗೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ,ಕೇಂದ್ರ ಸಂಸ್ಕತಿ ಇಲಾಖೆಯ ಫೆಲೋಶಿಪ್ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಅರಸಿಬಂದಿವೆ. ಮಧುರಕಂ� ,ಸುಂದರ ಮುಖ-ಮೈಕಟ್ಟಿನ ಹೊನ್ನಪ್ಪ ಭಾಗವತರು ತಮ್ಮ ಅಪಾರ ಕಲಾಭಿಮಾನಿಗಳನ್ನಗಲಿ ೧೯೯೨ರಲ್ಲಿ ತಮ್ಮ ಇಹಲೋಕಯಾತ್ರೆ ಮುಗಿಸಿದರು.

ಕೆ.ಕೆ.ಹೆಬ್ಬಾರ್

ರೇಖಾ ವಿನ್ಯಾಸ ಕಲಾ ಪ್ರಪಂಚದಲ್ಲಿ ಹೊಸ ಅಲೆಯನ್ನೆಬ್ಬಿಸಿ, ಭಾರತಕ್ಕೆ ಆಧುನಿಕ ಚಿತ್ರಕಲೆಯಲ್ಲಿ ವಿಶಿಷ್ಟ ಸ್ಥಾನ-ಮಾನ ತಂದುಕೊಟ್ಟ ಹೆಬ್ಷಾರರು ಜನಿಸಿದ್ದು ಉಡುಪಿ ಜಿಲ್ಲೆಯ ಕಟ್ಟಂಗೇರಿಯಲ್ಲಿ. ೧೯೧೧ಜೂನ್ ೧೫ರಂದು. ತಂದೆ ನಾರಾಯಣ ಹೆಬ್ಷಾರ್, ತಾಯಿ ಸೀತಮ್ಮ.
ಬಡತನ ಕುಟುಂಬದಲ್ಲಿ ಜನಿಸಿದ ಕಟ್ಟುಂಗೇರಿ ಕೃಷ್ಣ ಹೆಬ್ಬಾರರು, ಊರಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಬಾಲಕ ಕೃಷ್ಣ ಹೆಬ್ಬಾರರು ರವಿವರ್ಮನ ಚಿತ್ರಗಳಿಂದ ಪ್ರಭಾವಿತರಾಗಿ, ತನಗೂ ಚಿತ್ರಕಲೆ ಸಿದ್ಧಿಸುವಂತೆ, ಪ್ರತಿನಿತ್ಯ ಸರಸ್ವತಿಯ ಪಟ ಪೂಜಿಸುತ್ತಿದ್ದರಂತೆ. ಬಡತನದ ಬೇಗೆಯಿಂದ ವಿದ್ಯಾಭ್ಯಾಸ ಮುಂದುವರೆಸಲಾಗದ ಹೆಬ್ಬಾರರು ತಮ್ಮ ೧೪ನೇ ವಯಸ್ಸಿನಲ್ಲಿ, ಶಿಕ್ಷಕರಾಗಿ ಜೀವನ ಆರಂಭಿಸಿದರಾದರೂ ಚಿತ್ರಕಲೆಯ ವ್ಯಾಮೋಹ ಮಾತ್ರ ಬಿಡಲಿಲ್ಲ. ಚಿತ್ರಗಳ ಮೂಲಕವೇ ಮಕ್ಕಳಿಗೆ ಪಾ� ಹೇಳುತ್ತಿದ್ದರು.

ಮುಂದೆ ಹೆಬ್ಬಾರರು ಮುಂಬಯಿಯ ಜಿ.ಎಸ್. ದಂಡಾವತಿಯವರಲ್ಲಿ ಕಲಾವ್ಯಾಸಂಗ ಆರಂಭಿಸಿದರು. ನಂತರದಲ್ಲಿಯೇ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ರೇಖಾಚಿತ್ರ, ವರ್ಣಚಿತ್ರಗಳಲ್ಲಿ ಡಿಪ್ಲೋಮಾ ಪದವಿ ಪಡೆದ ಹೆಬ್ಷಾರರು, ಕೆಲವು ಕಾಲ ಅಲ್ಲಿಯೇ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ೧೯೪೯ರಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಯುರೋಪ್ ಪ್ರವಾಸ ಕೈಕೊಂಡು ಪ್ಯಾರಿಸ್ನಲ್ಲಿ ಎರಡು ವರ್ಷ ಅಧ್ಯಯನ ಮಾಡಿದರು. ಈ ಅವಧಿಯಲ್ಲಿಯೇ ಪ್ಯಾರಿಸ್, ಲಂಡನ್, ಜರ್ಮನಿ, ಬಲರ್ಿನ್, ನ್ಯೂಯಾರ್ಕ್, ಸಿಡ್ನಿ ಮುಂತಾದ ಕಡೆ ತಮ್ಮ ಕಲಾಕೃತಿಗಳನ್ನು ಪ್ರರ್ಶಿಸಿ ವಿಮರ್ಶಕರ ಮೆಚ್ಚುಗೆಗೆ ಪಾತ್ರರಾದರು.

ಹೆಬ್ಬಾರರ ವಿದೇಶಿ ಪ್ರವಾಸಗಳ ಫಲವಾಗಿ, ಅವರ ಬ್ಯಾಲೆ ನೃತ್ಯಕಾರರು, ಲೇಜೀಮ್ ಆಟದವರು, ರಷ್ಯಾದ ಕುಣಿಯುವ ಹುಡುಗಿ ಮುಂತಾದ ಕಲಾಕೃತಿಗಳಲ್ಲಿ ವಿದೇಶಿ ಕಲೆಯ ಪ್ರಭಾವವಿದೆ. ಇವರ ನಾಗಮಂಡಲ ಕುಣಿತದವರು, ಮಹಾಬಲೇಶ್ವರ ಸಂತೆ, ರಂಗಪಂಚಮಿ ಮುಂತಾದವು ಸ್ವದೇಶಿ ಪ್ರಭಾವದಿಂದ ರಚಿತವಾದವು. ಆದ್ದರಿಂದ ಪಾಶ್ಚಾತ್ಯ ಹಾಗೂ ಭಾರತೀಯ ಸಾಂಪ್ರದಾಯಿಕ ಚಿತ್ರಕಲೆ ಹೆಬ್ಬಾರರ ಚಿತ್ರಕಲೆಯ ವೈಶಿಷ್ಟ್ಯವೆಂದು ಹೇಳಬಹುದು.

ಹೆಬ್ಬಾರರ ಚಿತ್ರಗಳಲ್ಲಿ ಕಂಡು ಬರುವ ಲಯ ಮತ್ತು ರೇಖೆಗಳ ಪ್ರಾಮುಖ್ಯ ಅವರ ಸೃಜನಾತ್ಮಕ ಕಲಾದೃಷ್ಟಿಗೆ ಉತ್ತಮ ಉದಾಹರಣೆ. ಹೆಬ್ಷಾರರ ಕಲಾಸಾಧನೆಗೆ ಸಂದ ಪ್ರಶಸ್ತಿ - ಗೌರವಗಳು ಅನೇಕ. ಕೇಂದ್ರ ಲಲಿತ ಕಲಾ ಅಕಾಡೆಮಿ ಹಾಗೂ ರಾಜ್ಯ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕ, ಪದ್ಮಶ್ರೀ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ವೆಂಕಟಪ್ಪ ಪ್ರಶಸ್ತಿ ಪ್ರಮುಖವಾದುವು. ತಮ್ಮ ಅಪೂರ್ವ ಕಲಾಸಾಧನೆಯಿಂದ ಕರ್ನಾಟಕಕ್ಕೆ ಹಿರಿಮೆ ತಂದ ಈ ಹಿರಿಯ ಕಲಾವಿದ ೨೬ನೇ ಮಾರ್ಚ್ ೧೯೯೬ರಂದು ನಿಧನರಾದರು.

ಬಿ.ಎಂ.ಶ್ರೀ

ಕನ್ನಡ ನವೋದಯ ಕಾರ್ಯಪ್ರವರ್ತಕ, ಕನ್ನಡದ ಕಣ್ವ, ಕರ್ನಾಟಕದ ಆಚಾರ್ಯಪುರುಷ ಎಂದು ಖ್ಯಾತನಾಮರಾದ ಪ್ರೋಫೆಸರ್ ಬಿ.ಎಂ.ಶ್ರೀಕಂ� ಯ್ಯನವರು ಹುಟ್ಟಿದ್ದು ೧೮೮೪ರ ಜನವರಿ ೩ರಂದು ತುಮಕೂರು ಜಿಲ್ಲೆಯ ಸಂಪಿಗೆಯಲ್ಲಿ.
೧೯ನೇ ಶತಮಾನದಲ್ಲಿ ಕನ್ನಡ ಸಾಹಿತ್ಯದಲ್ಲಿ ಕಾವ್ಯರಚನೆ ಜಡಗಟ್ಟಿ ಅರ್ಥಹೀನವಾಗಿದ್ದ ಲಕ್ಷಣಗಳಿಗೆ ಕಟ್ಟುಬಿದ್ದು ಶುಷ್ಕವಾಗಿತ್ತು. ಇಂಗ್ಲೀಷ್ ವಿದ್ಯೆಯ ಪರಿಣಾಮವಾಗಿ ಹೊಮ್ಮಿ ಹರಡುತ್ತಿದ್ದ ಆಧುನಿಕ ವಿಚಾರಗಳನ್ನುಳ್ಳ ಗದ್ಯಗ್ರಂಥಗಳ ರಚನೆಯ ಅಗತ್ಯ ಇದೆ ಎಂಬ ಅರಿವು ಕರ್ನಾಟಕದ ಎಲ್ಲ ಕಡೆಯ ವಿದ್ಯಾವಂತರಲ್ಲಿ ಮೂಡುತ್ತಿತ್ತು. ಕನ್ನಡ ಕಾವ್ಯದಿಗಂತದಲ್ಲಿ ಝುಗಝುಗಿಸುತ್ತ ಇರುಳ ಬಸಿರಿಂದ ಹೊರಬಂದು ಸುತ್ತೆಲ್ಲ ಹೊಸ ಬೆಳ್ಳಂಬೆಳಕನ್ನು ಹರಡುವ ಸೂರ್ಯನ ಹುಟ್ಟಿಗಾಗಿ ನಾಡು ಕಾದಿತ್ತು. ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ ಮೊತ್ತಮೊದಲಿಗೆ ಶ್ರೀ ಕಾವ್ಯನಾಮವನ್ನು ಧರಿಸಿದ ಬಿ.ಎಂ.ಶ್ರೀ ಅವರ ಇಂಗ್ಲೀಷ್ ಗೀತೆಗಳು ಸಂಕಲನವನ್ನು ೧೯೨೬ರಲ್ಲಿ ಪ್ರಕಟಿಸಿದಾಗ, ಮೂಡಿದನು ರವಿ ಮೂಡಿದನು ಹೊಸ ಕನ್ನಡ ಕವಿ ಮೂಡಿದನು. ಕನ್ನಡ ಕಾವ್ಯಪ್ರಪಂಚದಲ್ಲಿ ನವೋದಯ ಯುಗ ಪ್ರಾರಂಭವಾಯಿತು. 'ಶ್ರೀ' ಅದರ ಹರಿಕಾರ, ಪ್ರವರ್ತಕರೆಂದೇ ಪ್ರಸಿದ್ಧರಾದರು.

’ಇಂಗ್ಲೀಷ್ ಗೀತೆಗಳು' ಒಂದು ಯುಗಪ್ರವರ್ತಕ ಕೃತಿ, ಭಾಷೆ, ಕಾವ್ಯಶೈಲಿ, ಛಂದಸ್ಸು, ಕಾವ್ಯದ ವಸ್ತು ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಕನ್ನಡ ಕಾವ್ಯಪರಂಪರೆಯಲ್ಲಿ ಅದರ ಹೊಸತನದ ಛಾಪುಎದ್ದು ಕಾಣುವಂಥದು. ಅಷ್ಟೇ ಅಲ್ಲದೆ, ಕಾವ್ಯ ವಸ್ತುವಿನ ಆಯ್ಕೆಯ ವಿಷಯದಲ್ಲಿಯೂ, ಶ್ರೀಯವರು ಕ್ರಾಂತಿಕಾರರಾದರು. ಕವಿಸಮಯ, ಅರ್ಥಾಲಂಕಾರ ಶಿಲ್ಪಾಲಂಕಾರ, ಆಶೈಲಿಗೆ ಒಗ್ಗಿ ಬಂದ ವರ್ಣ ವೃತ್ತ ಕಂದಕಗಳ ಬಳಕೆ ಈ ಎಲ್ಲ ಸಾಂಪ್ರದಾಯಿಕ ಸಂಕೋಲೆಗಳನ್ನು ಕಡಿದುಹಾಕಿ, ಅಚ್ಚ ಕನ್ನಡ ನುಡಿಯಲ್ಲಿ, ಕನ್ನಡ ಛಂದಸ್ಸಿನ ಹೊಸ - ಹೊಸ ಮಟ್ಟುಗಳಲ್ಲಿ, ಸ್ವಾನುಭವ ನಿಷ್� ಭಾವಗೀತೆಗಳನ್ನು ಸಮೃದ್ದವಾಗಿ ರಚಿಸಬಲ್ಲ ಕನ್ನಡ ಕವಿಗಳ ಹೊಸ ಪೀಳಿಗೆಯೊಂದು ಹುಟ್ಟಲು ಕಾರಣಪುರುಷರಾದವರು ಶ್ರೀಯವರು.

ಕನ್ನಡ ಸಾಹಿತ್ಯಕ್ಕೆ ಶ್ರೀಯವರು ಕೊಟ್ಟ ಇನ್ನೊಂದು ಅಭೂತಪೂರ್ವ ಕೊಡುಗೆ ಎಂದರೆ, ಸಂಸ್ಕತ ಕಾವ್ಯ ಪ್ರಪಂಚದಲ್ಲಿ ಇಲ್ಲದ, ದುರಂತ ನಾಟಕ. ಶ್ರೀ ಅವರ 'ಅಶ್ವತ್ಥಾಮನ್' ನಾಟಕ ಇಂಗ್ಲೀಷ್ ಗೀತಗಳಂತೆಯೇ ಕನ್ನಡ ಸಾಹಿತ್ಯದ ನಾಟಕ ಪ್ರಕಾರ ಶಾಖೆ ಬೆಳೆಯಲು ಹೊಸದಾರಿ ಹಾಕಿಕೊಟ್ಟ ಮಾರ್ಗ ಪ್ರವರ್ತಕ ಕೃತಿ.

ಬಿ.ಎಂ.ಶ್ರೀಯವರು ಕರ್ನಾಟಕ ಏಕೀಕರಣ ಚಳುವಳಿಯ ಪ್ರವರ್ತಕರಾಗಿ, ಪ್ರಾಚೀನ - ಆರ್ವಾಚೀನ ಕನ್ನಡ ಕವಿಗಳು ಕಂಡ ಕರ್ನಾಟಕವನ್ನು ವರ್ಣಿಸುವ ಕವನಗಳ ಸಂಕಲನವೊಂದನ್ನು ಕನ್ನಡದ ಬಾವುಟ ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಕನ್ನಡ ಬಾವುಟವನ್ನು ಹಿಡಿದು ಕನ್ನಡ ನಾಡನ್ನೆಲ್ಲ ಸುತ್ತಿ ಕರ್ನಾಟಕ ಏಕೀಕರಣದ ಹೋರಾಟಕ್ಕೆ ಕನ್ನಡ ಜನಮನವನ್ನು ಸಿದ್ಧಗೊಳಿಸಿದರು. ಹೀಗೆ ಕನ್ನಡ ಭಾಷೆ ಸಾಹಿತ್ಯಗಳ ಸರ್ವತೋಮುಖ ಪ್ರಗತಿ, ಕನ್ನಡ ನಾಡಿನ ಮತ್ತು ಕನ್ನಡಿಗರ ಐಕ್ಯತೆಗೆ ನಿರಂತರವಾಗಿ ದುಡಿದ ಶ್ರೀಯವರು ೧೯೪೬ರಲ್ಲಿ ಇಹಲೋಕ ತ್ಯಜಿಸಿದರು.

ಎಚ್. ಎಲ್. ಎನ್. ಸಿಂಹ

ಕನ್ನಡ ಚಲನಚಿತ್ರರಂಗದ ಆರಂಭದ ದಿನಗಳಲ್ಲಿ ನಟ, ಲೇಖಕ ಹಾಗೂ ದಿಗ್ದರ್ಶಕರೆಂದೇ ಖ್ಯಾತರಾಗಿದ್ದ ಎಚ್.ಎಲ್.ಎನ್.ಸಿಂಹ ಅವರು ಜನಿಸಿದ್ದು, ೧೯೦೪ರಲ್ಲಿ ಮಳವಳ್ಳಿಯಲ್ಲಿ.

ಕನ್ನಡ ವಾಕ್ಚಿತ್ರರಂಗದ ಆರಂಭದ ವರ್ಷಗಳಲ್ಲಿ ಪೌರಾಣಿಕ ಹಾಗೂ ಜಾನಪದ ವಸ್ತುಗಳೇ ಪ್ರಧಾನವಾಗಿದ್ದ ಚಲನಚಿತ್ರರಂಗಕ್ಕೆ 'ಸಂಸಾರ ನೌಕೆ' ಎಂಬ ಸಾಮಾಜಿಕ ಚಿತ್ರ ನೀಡಿ ಹೊಸ ಆಯಾಮವಿತ್ತ ಖ್ಯಾತಿಗೂ ಸಿಂಹರು ಪಾತ್ರರು. ಅಷ್ಟೇ ಅಲ್ಲದೇ ಚಲನಚಿತ್ರರಂಗದ ದಿಗ್ಗಜರಾದ ಡಾ||ರಾಜಕುಮಾರ, ಬಿ.ಆರ್. ಪಂತುಲು, ಜಿ.ವಿ.ಅಯ್ಯರ್, ಪಂಡರಿಬಾಯಿ, ನರಸಿಂಹರಾಜು ಮುಂತಾದ ನಟರನ್ನೂ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ವಿದ್ಯಾರ್ಥಿಯಾಗಿದ್ದಾಗ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾಟಕದಲ್ಲಿ ಅಭಿನಯಿಸುವ ಅವಕಾಶ ತಪ್ಪಿಹೋದದ್ದನ್ನೆ ಸವಾಲಾಗಿ ಸ್ವೀಕರಿಸಿ, "ಡೆಸ್ಟಿನಿ ರೂಲ್ಸ್ ಹ್ಯುಮ್ಯಾನಿಟಿ" ಎಂಬ ಇಂಗ್ಲೀಷ್ ನಾಟಕ ಬರೆದು ಅಭಿನಯಿಸಿದರು. ಇವರ ಈ ಛಲದ ಪರಿಣಾಮವೇ ಇವರು ಮುಂದೆ ’ಭಾರತ ಮನೋಲ್ಲಾಸಿನಿ ಕಂಪನಿ' ಸೇರಿದ್ದು ಅಲ್ಲಿ ಮಹಮ್ಮದ್ ಪೀರ್ ಹಾಸ್ಯಾಭಿನಯ ಇವರನ್ನು ವಿಶೇಷವಾಗಿ ಆಕರ್ಷಿಸಿತು. ಅನಂತರ ಸಿಂಹ ಅವರು ವೀರಣ್ಣನವರು ತಯಾರಿಸಿದ 'ಹಿಸ್ ಲವ್ ಅಫೇರ್ಸ್' ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಮುಂದೆ ಮಹಮ್ಮದ್ ಪೀರರ ಕಂಪನಿಯ 'ಷಹಜಹಾನ್' ನಾಟಕದಲ್ಲಿ ನಾಯಕ ಪಾತ್ರದಲ್ಲಿ ಮಿಂಚಿದರು. ಪೀರ್ ಮತ್ತು ಸಿಂಹ ಅವರು ಒಂದೆ ನಾಣ್ಯದ ಎರಡು ಮುಖಗಳಂತೆ ”ಚಂದ್ರಕಲಾ ಮಂಡಳಿ' ಕಂಪನಿಯ ಪ್ರಗತಿಗಾಗಿ ದುಡಿದರು.

ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳಿಗೆ ಬ್ರೇಕ್ ಹಾಕಿ ಸಾಮಾಜಿಕ ನಾಟಕ ಪ್ರದರ್ಶಿಸಬೇಕೆಂಬ ಗೆಳೆಯ ಪೀರ್ನ ಬಯಕೆಯ ಫಲವೇ ಸಿಂಹರ "ಸಂಸಾರ ನೌಕೆ" ನಾಟಕ. ಈ ನಾಟಕ ಉತ್ತರ ಕರ್ನಾಟಕದಲ್ಲಿ ಸತತ ಮೂರು ತಿಂಗಳ ಕಾಲ ಪ್ರದರ್ಶನಗೊಂಡು ಹೊಸ ಇತಿಹಾಸವನ್ನು ಸೃಷ್ಟಿಸಿ ಗೆಳೆಯರಿಬ್ಷರಿಗೂ ಕೀರ್ತಿ ತಂದಿತು. ಈ ಕೀರ್ತಿಯೇ ಮುಂದೆ ಸಿಂಹರನ್ನು ಸಿನಿಮಾ ಮಾಡುವ ಸಾಹಸಕ್ಕಿಳಿಸಿತು. ಮುಂದೆ ಸಿಂಹ ಅವರು ಮದರಾಸಿನ ಎ.ವಿ.ಎಂ ಹಾಗೂ ಗುಬ್ಷಿವೀರಣ್ಣನವರ ಸಹಭಾಗಿತ್ವದಲ್ಲಿ 'ಗುಣಸಾಗರಿ' ಚಿತ್ರ ನಿರ್ದೇಶಿಸಿದರು. ಅನಂತರ ಬೇಡರಕಣ್ಣಪ್ಪ ಹಾಗೂ ಅವರ ಸ್ವಂತ ಚಿತ್ರ ಸಂಸ್ಥೆಯಲ್ಲಿ 'ಅಬ್ಷಾ ಆ ಹುಡುಗಿ' ಚಿತ್ರ ನಿರ್ಮಿಸಿದರು. ಹೀಗೆ ಕನ್ನಡ ಚಲನಚಿತ್ರ ರಂಗಕ್ಕೆ ಹೊಸ ಆಯಾಮವಿತ್ತು, ಅಪೂರ್ವ ಪ್ರತಿಭೆಗಳನ್ನು ರಂಗಕ್ಕೆ ನೀಡಿದ ಈ ಧೀಮಂತ ಜುಲೈ ೨ರ ೧೯೭೨ರಂದು ಇಹಲೋಕ ತ್ಯಜಿಸಿದರು.

ಆರ್. ಕೆ. ಶ್ರೀಕಂಠನ್

ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜರು, ಗಾಯಕರು, ಹಾಗೂ ವಿದ್ವಾಂಸರಾದ ಶ್ರೀ ಆರ್.ಕೆ. ಶಶ್ರೀಕಂಠನ್ ಅವರ ಜನನ ೧೯೨೦ರಲ್ಲಿ ಸಂಗೀತಕ್ಕೆ ಪ್ರಖ್ಯಾತವಾದ ಕುಟುಂಬದಲ್ಲಿ. ತಂದೆ ಕೃಷ್ಣಶಾಸ್ತ್ರಿಗಳು, ತಾಯಿ ಸಣ್ಣಮ್ಮ, ಹುಟ್ಟೂರು ಹಾಸನ ಜಿಲ್ಲೆಯ ರುದ್ರಪಟ್ಟಣಂ.
ಹರಿಕಥಾದಾಸರು, ಸಂಗೀತ ವಿದ್ವಾಂಸರು, ಕವಿಗಳೂ ಆಗಿದ್ದ ತಂದೆ ಕೃಷ್ಣಶಾಸ್ತ್ರಿಗಳು, ಎರಡು ವರ್ಷದ ಬಾಲಕ ಶಶ್ರೀಕಂಠನ್ ನನ್ನು ಸಂಗೀತ ಕಚೇರಿಗಳಿಗೆ ಕರೆದ್ಯೊಯ್ಯುತ್ತಿದ್ದರಂತೆ. ಇದರ ಪರಿಣಾಮ ಶ್ರೀಕಂಠನ್ ಅವರಿಗೆ ಸಂಗೀತದಲ್ಲಿ ಅಭಿರುಚಿ ಮೂಡಿತು. ತಂದೆ ಕೃಷ್ಣಶಾಸ್ತ್ರೀ ಅವರಿಂದ ಸಂಗೀತದ 'ಸರಿಗಮ' ಓನಾಮ ಕಲಿತ ಶಶ್ರೀಕಂಠನ್ ನ್, ಮುಂದೆ ಸಹೋದರ ಆರ್.ಕೆ. ವೆಂಕಟರಾಮಾಶಾಸ್ತ್ರೀ, ಮುಸುರಿ ಸುಬ್ರಹ್ಮಣ್ಯ, ಮಹಾರಾಜಪುರಂ ವಿಶ್ವನಾಥ ಅಯ್ಯರ್, ಅರಿಯಕುಡಿ ರಾಮಾನುಜಂ ಅಯ್ಯಂಗಾರ್, ಶಮ್ಮನಗುಡಿ ಶ್ರೀನಿವಾಸ ಅಯ್ಯಂಗಾರ್ ಹೀಗೆ ಸಂಗೀತದ ದಿಗ್ಗಜರುಗಳಿಂದ ಸಂಗೀತದ ಪಾಠ ಕಲಿತು ಪರಿಣತರಾದರು.

೧೯೫೦ರಲ್ಲಿ ಬೆಂಗಳೂರಿನ ಆಕಾಶವಾಣಿ ನಿಲಯದ ಸಂಗೀತ ವಿಭಾಗದ ಮುಖ್ಯ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿತೊಡಗಿದ ಶ್ರೀಕಂಠನ್ ೧೯೮೧ರಲ್ಲಿ ನಿವೃತ್ತರಾಗುವವರೆಗೂ, ಆ ಕ್ಷೇತ್ರದಲ್ಲಿ ದಕ್ಷತೆಯಿಂದ ದುಡಿದು ಹೆಸರುಗಳಿಸಿದರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿ "ಸಂಗೀತ ಭಾರತಿ" ಎಂಬ ವಿದ್ಯಾಸಂಸ್ಥೆಯನ್ನು ನಡೆಸುತ್ತಿದ್ದಾರೆ. ಕರ್ನಾಟಕ ಸಂಗೀತದ ಯಾವುದೇ ಕೃತಿಗಳನ್ನಾಗಲಿ, ದಾಸರ ಪದಗಳನ್ನಾಗಲೀ ಶಶ್ರೀಕಂಠನ್ರ ಕಂಠ ದಲ್ಲಿ ಕೇಳುವುದೆಂದರೆ ಅದೊಂದು ರಸದೌತಣವೇ ಸರಿ.ಶ್ರೀಯುತರು ದೇಶ-ವಿದೇಶಗಳಲ್ಲಿ ತಮ್ಮ ಕಾರ್ಯಕ್ರಮ ನೀಡಿ ಜನಮನ್ನಣೆಗಳಿಸಿದ್ದಾರೆ. ಅಷ್ಟೇ ಅಲ್ಲದೇ ಕೇರಳದ ಪಾಲ್ಘಾಟ್ನ ಸಂಗೀತ ಕಾಲೇಜಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ, ಅಮೇರಿಕಾ, ನ್ಯೂಯಾರ್ಕ್, ಕೆನಡಾ ಮುಂತಾದೆಡೆ ಸಂಗೀತದ ಉಪನ್ಯಾಸಗಳನ್ನೂ ನೀಡಿದ್ದಾರೆ.

ಶ್ರೀಕಂಠನ್ ನ್ರ ಸಂಗೀತ ಪ್ರತಿಭೆಗೆ ಸಂದ ಪ್ರಶಸ್ತಿ - ಗೌರವ - ಪುರಸ್ಕಾರಗಳು ಹಲವು. ಅವುಗಳಲ್ಲಿ - ತಿರುವಂತನಪುರದ ಅರಮನೆಯಲ್ಲಿ ಪ್ರತಿವರ್ಷ ನಡೆಯುವ ನವರಾತ್ರಿ ಉತ್ಸವವದಲ್ಲಿ ಶ್ರೀಯುತರು ವಿಶೇಷ ಆಹ್ವಾನಿತರು. ಬೆಂಗಳೂರಿನ ಗಾಯನ ಸಮಾಜದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿ 'ಸಂಗೀತ ಕಲಾರತ್ನ' ಎಂಬ ಬಿರುದಿಗೆ ಪಾತ್ರರಾಗಿದ್ದು, ಕೇಂದ್ರ ಸಂಗೀತ ಅಕಾಡೆಮಿ ಹಾಗೂ ರಾಜ್ಯ ಸಂಗೀತ ಅಕಾಡೆಮಿಗಳ ಪ್ರಶಸ್ತಿ, ಕರ್ನಾಟಕ ಸರ್ಕಾರದ ಕನಕ - ಪುರಂದರ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳು, ತಿರುಪತಿ ತ್ಯಾಗರಾಜ ಸಂಗೀತ ಟ್ರಸ್ಟಿನ `ಸಪ್ತಗಿರಿ ಸಂಗೀತ ವಿದ್ವತ್ ವಾಣಿ' ಪ್ರಶಸ್ತಿ, ಚೆನ್ನೈ ಸಂಗೀತ ಅಕಾಡೆಮಿಯ ಸಂಗೀತ ಕಲಾನಿಧಿ ಪ್ರಶಸ್ತಿ ಪ್ರಮುಖವಾದುವು.